1 Chronicles 10

ಅರಸನಾದ ದಾವೀದನ ಚರಿತ್ರೆ 10-29

ದಾವೀದನ ರಾಜಕೀಯ ಕಾರ್ಯಗಳು. 10:1—21:27

ಸೌಲನ ಅಂತ್ಯ

1ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡಿದರು. ಇಸ್ರಾಯೇಲರು ಅವರಿಂದ ಅಪಜಯಹೊಂದಿ ಗಿಲ್ಬೋವ ಬೆಟ್ಟದಲ್ಲಿ ಸತ್ತುಹೋದರು. 2ಫಿಲಿಷ್ಟಿಯರು ಸೌಲನನ್ನೂ, ಅವನ ಮಕ್ಕಳನ್ನೂ ಬಿಡದೆ ಹಿಂದಟ್ಟಿ, ಅವನ ಮಕ್ಕಳಾದ ಯೋನಾತಾನನ್ನೂ, ಅಬೀನಾದಾಬನನ್ನೂ ಮತ್ತು ಮಲ್ಕೀಷೂವನನ್ನೂ ಕೊಂದರು. 3ಸೌಲನಿದ್ದ ಕಡೆಯಲ್ಲಿ ಯುದ್ಧವು ಬಹು ಘೋರವಾಗಿತ್ತು. ಬಿಲ್ಲುಗಾರರು ಅವನಿಗೆ ಗುರಿಯಿಟ್ಟರು.

4ಆಗ ಸೌಲನು ತನ್ನ ಆಯುಧ ಹೊರುವವನಿಗೆ, <<ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ತಿವಿದು ಕೊಲ್ಲು, ಇಲ್ಲವಾದರೆ ಸುನ್ನತಿಯಿಲ್ಲದ ಈ ಜನರು ಬಂದು ನನಗೆ ಅಪಕೀರ್ತಿ ತಂದಾರು. ಅವತಿಂದ ನಾನು ಸಾಯಬಾರದು>> ಎಂದು ಹೇಳಲು ಅವನು ಹೆದರಿ ಹಿಂಜರಿದನು. ಆದುದರಿಂದ ಸೌಲನು ತಾನೇ ಕತ್ತಿಯನ್ನು ಹಿರಿದು, ಅದರ ಮೇಲೆ ಬಿದ್ದನು.

5ಸೌಲನು ಸತ್ತದ್ದನ್ನು ಅವನ ಆಯುಧ ಹೊರುವವನ್ನು ಕಂಡು ತಾನೂ ತನ್ನ ಕತ್ತಿಯ ಮೇಲೆ ಬಿದ್ದು ಸತ್ತನು. 6ಹೀಗೆ ಸೌಲನೂ, ಅವನ ಮೂರು ಮಕ್ಕಳೂ, ಅವನ ಮನೆಯವರೆಲ್ಲರೂ ಅದೇ ದಿನದಲ್ಲಿ ಸತ್ತರು.

7ಇಸ್ರಾಯೇಲರು ಸೋತು ಹೋದರು. ಸೌಲನೂ, ಅವನ ಮಕ್ಕಳು ಸತ್ತರು ಎಂಬ ವರ್ತಮಾನವನ್ನು ತಗ್ಗಿನಲ್ಲಿ ವಾಸವಾಗಿದ್ದ ಇಸ್ರಾಯೇಲರೆಲ್ಲರೂ ಕೇಳಿ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಮಾಡಿದರು.

8ಮರುದಿನ ಬೆಳಿಗ್ಗೆ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳುವುದಕ್ಕಾಗಿ ಬಂದಾಗ, ಸೌಲನೂ ಅವನ ಮೂರು ಮಕ್ಕಳೂ ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವುದನ್ನು ಕಂಡರು.

9ಫಿಲಿಷ್ಟಿಯರು ಸೌಲನಿಗಿರುವುದೆಲ್ಲವನ್ನು ಸುಲಿದುಕೊಂಡು ಅವನ ತಲೆಯನ್ನೂ, ಆಯುಧಗಳನ್ನೂ ತಮ್ಮ ದೇಶದ ಎಲ್ಲಾ ಕಡೆಗೆ ಕಳುಹಿಸಿ, ತಮ್ಮ ದೇವತೆಗಳಿಗೂ, ಜನರಿಗೂ ಜಯವಾರ್ತೆಯನ್ನು ಮುಟ್ಟಿಸಿದರು. 10ಅವನ ಆಯುಧಗಳನ್ನು ತಮ್ಮ ದೇವಸ್ಥಾನದಲ್ಲಿಟ್ಟರು. ಅವನ ತಲೆಯನ್ನು ದಾಗೋನನ ಗುಡಿಯಲ್ಲಿ ನೇತುಹಾಕಿದರು.

11ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬ ವರ್ತಮಾನವು ಯಾಬೇಷ್ ಗಿಲ್ಯಾದವರಿಗೆ ಮುಟ್ಟಿತು. 12ಆಗ ಅವರಲ್ಲಿರುವ ಶೂರರೆಲ್ಲರೂ ಹೊರಟುಹೋಗಿ ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಯಾಬೇಷಿಗೆ ತೆಗೆದುಕೊಂಡು ಬಂದು, ಅವರ ಎಲುಬುಗಳನ್ನು ಅಲ್ಲಿದ್ದ ಏಲಾಮರದ ಕೆಳಗೆ ಸಮಾಧಿ ಮಾಡಿ, ಏಳು ದಿನಗಳ ವರೆಗೆ ಉಪವಾಸ ಮಾಡಿದರು.

13ಸೌಲನು ಯೆಹೋವನ ಮಾತು ಕೇಳದೆ ಆತನಿಗೆ ವಿರೋಧವಾಗಿ ದ್ರೋಹ ಮಾಡಿದ್ದರಿಂದಲೂ, ಯೆಹೋವನ ಸನ್ನಿಧಿಯಲ್ಲಿ ವಿಚಾರಿಸದೇ, ಭೂತ, ಪ್ರೇತಗಳನ್ನು ನಂಬಿ ದೇವ ದ್ರೋಹಿಯಾದುದರಿಂದ ಅವನಿಗೆ ಇಂಥಹ ಮರಣವಾಯಿತು. ಯೆಹೋವನು ಅವನನ್ನು ಕೊಲ್ಲಿಸಿ, ರಾಜ್ಯವನ್ನು ಇಷಯನ ಮಗನಾದ ದಾವೀದನಿಗೆ ಒಪ್ಪಿಸಿದನು.

14

Copyright information for KanULB